ಹೋಟೆಲ್ ಸಾಲಿಟೇರಿನಲ್ಲೊಂದು ಸುಂದರ ಸಂಜೆ
(ಡಾ. C.L.L. ಗೌಡ ಇವರ ಪದೋನ್ನತಿಯ ಸಂಭ್ರಮಾಚರಣೆ)
| ಡಾ. C. ಲಕ್ಷ್ಮೀಪತಿ ಗೌಡ (ಡಾ. CLL ಗೌಡ) ಹಾಗೂ ಶ್ರೀಮತಿ ಸುಶೀಲ ಗೌಡ ಅವರನ್ನು ಪುಷ್ಪಗುಚ್ಛ ಕೊಟ್ಟು ಸ್ವಾಗತಿಸುತ್ತಿರುವ KAPAದ ಪದಾಧಿಕಾರಿಗಳಾದ ಡಾ. ವಿರೂಪಾಕ್ಷಪ್ಪ ಮತ್ತು ವೆಂಕಟೇಶ್ ಕುಲಕರ್ಣಿ |
ಇದು ಒಂದು ಔಪಚಾರಿಕ ಸಭೆಯಾಗಿದ್ದರಿಂದ ಸಂಘದ ಸದಸ್ಯರೆಲ್ಲರಿಗೂ ಆಹ್ವಾನ ಹೋಗಿದ್ದರೂ ಸಹ ಇದನ್ನು ಪರಿಮಿತ ಸದಸ್ಯರೊಂದಿಗೆ ಆಚರಿಸುವ ಉದ್ದೇಶವನ್ನು KAPAದ ಕಾರ್ಯಕಾರಿಣಿ ಸಮಿತಿಯು ಹೊಂದಿತ್ತು. ಅದರಂತೆ ಮೂವತ್ತು ಸಕ್ರಿಯ ಸದಸ್ಯರನ್ನೊಳಗೊಂಡಂತೆ ಸಮಾರಂಭವು ನಡೆಯಿತು. ಈ ಸಮಾರಂಭಕ್ಕೆ ಡಾ. CLL ಗೌಡರು ತಮ್ಮ ಶ್ರೀಮತಿ, ಸುಶೀಲಾ ಗೌಡ ಅವರೊಂದಿಗೆ ಆಗಮಿಸಿದ್ದು ಸಮಾರಂಭಕ್ಕೆ ಕಳೆ ಕಟ್ಟಿತು. ಯಾವುದೇ ಆಡಂಬರಗಳಿಲ್ಲದಂತೆ ಡಾ. ಗೌಡ ಮತ್ತು ಅವರ ಶ್ರೀಮತಿಯವರನ್ನು ಕೇವಲ ಪುಷ್ಪಗುಚ್ಛವನ್ನು ಕೊಡುವುದರ ಮೂಲಕ ಸಮಾರಂಭಕ್ಕೆ ಸ್ವಾಗತಿಸಲಾಯಿತು. ನಂತರ ಸಭೆಯಲ್ಲಿ ಹಾಜರಿದ್ದ ಸದಸ್ಯರು ಒಬ್ಬೊಬ್ಬರಾಗಿ ತಮ್ಮನ್ನು ತಾವು ಸಭೆಗೆ ಪರಿಚಯಿಸಿಕೊಳ್ಳುತ್ತಾ ಡಾ. ಗೌಡ ಅವರ ಬಗೆಗಿನ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದು ಈ ಸಮಾರಂಭದ ವಿಶೇಷವಾಗಿತ್ತು. ಆರಂಭದಲ್ಲಿ ವೆಂಕಟೇಶ್ ಕುಲಕರ್ಣಿಯವರು ಮಾತನಾಡಿ ತಾವು ICRISATನಲ್ಲಿ ಸಂದರ್ಶಕ ವಿಜ್ಞಾನಿಯಾಗಿ ಕಾರ್ಯನಿರತರಾಗಿದ್ದಾಗಿನ ತಮ್ಮ ಅನುಭವಗಳನ್ನು ಹಂಚಿಕೊಂಡರು. ಅವರು ಪ್ರಧಾನವಾಗಿ ಡಾ. ಗೌಡ ಅವರಿಗೆ ಬೇರೆ ಬೇರೆ ಖಾಸಗಿ ಹಾಗು ಸಾರ್ವಜನಿಕ ಸಂಸ್ಥೆಗಳಿಂದ ಉನ್ನತ ಹುದ್ದೆ ಮತ್ತು ಅಧಿಕ ಸಂಭಾವನೆ ದೊರೆಯುವ ಹುದ್ದೆಗಳಿಗೆ ಆಹ್ವಾನ ಬಂದಿದ್ದರೂ ಸಹ ಅವರು ಅವುಗಳನ್ನೆಲ್ಲಾ ಕಡೆಗಣಿಸಿ ತಾವು ಸುಮಾರು ೩೮ ವರ್ಷಗಳಿಂದ (೧೯೭೫ರಿಂದ) ಸೇವೆ ಸಲ್ಲಿಸುತ್ತಿರುವ ಸಂಸ್ಥೆಗೇ ನಿಷ್ಠರಾಗಿ ಉಳಿದದ್ದನ್ನು ಪ್ರಸ್ತಾಪಿಸಿದರು. ಅದರೊಂದಿಗೆ ಡಾ. ಗೌಡ ಅವರ ಮಿತಭಾಷಿತನ ಮತ್ತು ಅವರು ಸಂಶೋಧನಾ ಬರಹ ಮತ್ತು ಲೇಖನಗಳನ್ನು ಅಗಾಧ ತಾಳ್ಮೆ ಮತ್ತು ಕರಾರುವಾಕ್ಕಾಗಿ ಪೂರ್ಣವಿರಾಮ ಚಿಹ್ನೆ, ಅಲ್ಪವಿರಾಮ ಚಿಹ್ನೆಗಳೊಂದಿಗೆ, ಪದರಚನೆಯ ಹಾಗೂ ವ್ಯಾಕರಣದ ದೋಷಗಳನ್ನು ತಿದ್ದುವ ಅವರ ಅದ್ಭುತ ಕೌಶಲ್ಯವನ್ನು ಜ್ಞಾಪಿಸಿಕೊಂಡರು. ಡಾ. ಭರತ್ ಸೊಂಟಕ್ಕಿ, NAARM, ಇವರು ಮಾತನಾಡಿ ಅಲ್ಲಿ ತಾವು ಉದ್ಯೋಗಕ್ಕೆ ಹೊಸದಾಗಿ ಸೇರಿದಾಗ ವಿಶೇಷ ಉಪನ್ಯಾಸ ನೀಡಲು ಬಂದಿದ್ದ ಡಾ. ಗೌಡರನ್ನು ತಾವು ಪರಿಚಯ ಮಾಡಿಕೊಂಡದ್ದು ಮತ್ತು ಅವರು ತೋರಿದ ಆತ್ಮೀಯತೆಯನ್ನು ಜ್ಞಾಪಿಸಿಕೊಂಡರು. ಸಂಘದ ಉಪಕಾರ್ಯದರ್ಶಿಯಾಗಿರುವ ಡಾ. ವಿರುಪಾಕ್ಷಪ್ಪ, ಸಂಘದ ಆಂತರಿಕ ಲೆಕ್ಕ ಪರಿಶೋಧಕರಾಗಿರುವ ಶ್ರೀ ಎಂ. ಎಸ್. ದೇಶಪಾಂಡೆ, ಮತ್ತು ಸಚೇತಕ ಸಮಿತಿಯ ಸದಸ್ಯರಾಗಿರುವ ಶ್ರೀ ಮುತಾಲಿಕ್ ದೇಸಾಯಿ, ಇವರುಗಳು ಡಾ. ಗೌಡ ಅವರು ತಮಗೆಲ್ಲಾ ಆದರ್ಶವಾಗಿದ್ದಾರೆಂದೂ ಅವರಿಂದ ಅಳವಡಿಸಿಕೊಳ್ಳಬಹುದಾದ ಶಿಸ್ತು ಮತ್ತು ಸಂಯಮಗಳ ಕುರಿತು ಹೇಳಿದ್ದಲ್ಲದೆ ಅವರ ಸಾಧನೆಯ ಕುರಿತು ಹೆಮ್ಮೆಯನ್ನು ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಡಾ. ರವಿ ಗಿರಿಯಾಪುರ ಅವರು, ಮಾರ್ಗದರ್ಶಕರಾಗಲು ಯೋಗ್ಯರಾದವರು ಮಾತ್ರ ನಿಖರವಾಗಿ ಮತ್ತು ಸ್ಪುಟವಾಗಿ ಎಲ್ಲಿ ಪೂರ್ಣ ವಿರಾಮ ಚಿಹ್ನೆ ಇಡಬೇಕು, ಎಲ್ಲಿ ಅರ್ಧ ವಿರಾಮ ಚಿಹ್ನೆ ಇಡಬೇಕು ಎಂದು ನಿಖರವಾಗಿ ಹೇಳಬಲ್ಲರು ಎಂದದ್ದಲ್ಲದೆ. ಹೂವಿನೊಂದಿಗೆ ನಾರು ಸ್ವರ್ಗಕ್ಕೇರುವಂತೆ KAPAವು ಇಂದು ಹೊಂದಿರುವ ಉನ್ನತ ಸ್ಥಾನಕ್ಕೆ ಕಾರಣರಾಗಿರುವ ಇಂತಹ ಹಿರಿಯ ಸದಸ್ಯರ ಪುಣ್ಯದಿಂದಾಗಿ KAPAದ ಸದಸ್ಯರಾಗಿರುವ ನಾವೂ ಸಹ ಸಾರ್ವಜನಿಕವಾಗಿ ಘನತೆಯನ್ನು ಪಡೆದುಕೊಂಡಿದ್ದೇವೆ ಎಂದು ಹೇಳಿದರು. ಶ್ರೀಯುತ ಜಗದೀಶ್ ಹಳ್ಳದ್, ಇವರು ಡಾ. ಗೌಡರ ಸರಳತೆಯ ಬಗ್ಗೆ ಮಾತನಾಡುತ್ತಿದ್ದಾಗ ಮಧ್ಯ ಪ್ರವೇಶಿಸಿದ ಸಂಘದ ಕಾರ್ಯದರ್ಶಿ ಹಾಗೂ ಈ ಸಭೆಯ ಆಯೋಜಕರಾಗಿರುವ ನಾರಾಯಣ ಭಟ್ಟರು, ಜಗದೀಶ ಹಳ್ಳದ್ ಅವರು ಗೌಡರನ್ನು ಪ್ರಥಮ ಬಾರಿ ಭೇಟಿಯಾದಾಗ ಇಂತಹ ಮಹಾನ್ ವ್ಯಕ್ತಿಗಳು ನಮ್ಮ ಸಂಘದ ಸದಸ್ಯರಾಗಿದ್ದಾರೆ ಎನ್ನುವುದನ್ನು ತಿಳಿದು ಆನಂದವುಕ್ಕಿ ಬಂದು ಒಂದು ದಿನವೆಲ್ಲಾ ಅದೇ ಗುಂಗಿನಲ್ಲಿದ್ದನ್ನು ಸ್ಮರಿಸಿದರು. ಹಾಗೆಯೇ ಮುಂದುವರೆಯುತ್ತಾ ಮಾತನಾಡಿದ ಭಟ್ಟರು, ಡಾ. ಗೌಡ ಅವರು ಸಮಸ್ಯೆಗಳಿಗೆ ತೋರಿಸುವ ಸರಳ ಮತ್ತು ನಿರ್ದಿಷ್ಟವಾದ ಪರಿಹಾರಗಳು ಮತ್ತು ಕೂಲಂಕುಷವಾಗಿ ಮತ್ತು ನಿಖರವಾಗಿ ಕಾರ್ಯಕ್ರಮಗಳನ್ನು ಆಯೋಜಿಸುವ ಅವರ ಕಾರ್ಯವೈಖರಿಯನ್ನು ಕೊಂಡಾಡಿದರು ಮತ್ತು ಅವರಿಗೆ ದಿನನಿತ್ಯವೂ ಬರುವ ನೂರಾರು ಮಿಂಚೋಲೆಗಳಿಗೆ (ಇ-ಮೇಲ್) ಕ್ಷಿಪ್ರವಾಗಿ ಪ್ರತಿಕ್ರಿಯಿಸುವುದನ್ನೂ ಸಹ ಸ್ಮರಿಸಿಕೊಂಡರು. ಇದರ ನಂತರ ಮಾತನಾಡಿದ ಶ್ರೀಧರ್ ಬಂಡ್ರಿಯವರು ಪ್ರತಿಯೊಬ್ಬ ಗಂಡಸಿನ ಯಶಸ್ಸಿನ ಹಿಂದೆ ಒಬ್ಬ ಸ್ತ್ರೀಯ ಪಾತ್ರವಿರುತ್ತದೆ ಎಂದು ಹೇಳಿ ತಡವಾಗಿಯಾದರೂ ICRISATನ ನೇಮಕಾತಿ ಮಂಡಳಿಯು ಇವರ ಸಾಮರ್ಥ್ಯವನ್ನು ಗುರುತಿಸಿದ್ದರ ಪರಿಣಾಮವಾಗಿ ಉಪಮಹಾನಿರ್ದೇಶಕರ (DDG) ಪದವಿಗೇರಿದ ಡಾ. ಗೌಡ ಅವರನ್ನೂ ಅಭಿನಂದಿಸಿದರು.
ಶ್ರೀಯುತ ಚಂದ್ರಶೇಖರ ಕಾಟಮದೇವರ ಕೋಟೆ, ಚನ್ನಮಲ್ಲಿಕಾರ್ಜುನ, ಅಂಬಾದಾಸ್ ಕುಲಕರ್ಣಿ, ಮಹೇಶ್ವರಪ್ಪ, ಪೊನ್ನಣ್ಣ, ಇವರೆಲ್ಲರೂ ಸಹ ಡಾ. ಗೌಡರು ಇನ್ನಷ್ಟು ಉನ್ನತವಾದ ಹುದ್ದೆಗಳನ್ನು ಅಲಂಕರಿಸಲು ಅವರಿಗೆ ಅವಶ್ಯವಾದ ಆರೋಗ್ಯವನ್ನು ಭಗವಂತನು ದಯಪಾಲಿಸಲಿ ಎಂದು ಹಾರೈಸಿ ಶುಭಕೋರಿದರು. KAPAದ ಖಜಾಂಚಿಯಾಗಿರುವ ಡಾ. ಸತೀಶ್ ಹೆಗಡೆಯವರು ಮಾತನಾಡುತ್ತಾ ಭಗವದ್ಗೀತೆಯ ಶ್ಲೋಕವೊಂದನ್ನು ಉದಾಹರಿಸಿದರು. ಯದ್ಯದಾಚರತಿ ಶ್ರೇಷ್ಠಃ ತತ್ತದೇವೋತರೋ ಜನಾಃ, ಸಃ ಯತ್ ಪ್ರಮಾಣಂ ಕುರುತೇ ಲೋಕಸ್ತದನುವರ್ತತೇ ಅಂದರೆ ಶ್ರೇಷ್ಠರಾದವರು ಯಾವ ರೀತಿ ನಡೆದುಕೊಳ್ಳುತ್ತಾರೋ ಅವರನ್ನು ಇತರೇ ಜನರು ಅನುಸರಿಸುತ್ತಾರೆ ಹಾಗು ಅವರು ಯಾವುದನ್ನು ಉತ್ಕೃಷ್ಟವಾದದ್ದೆಂದು ಪ್ರಮಾಣಿಸುತ್ತಾರೆಯೋ ಅದನ್ನವರು ಅನುಕರಿಸುತ್ತಾರೆ ಎಂದು ಹೇಳಿದರು. ಇಂದು ನಮ್ಮ ಮಕ್ಕಳಿಗೆ ಒಳ್ಳೆಯ ವ್ಯಕ್ತಿತ್ವವಿಲ್ಲದ ಒಬ್ಬ ಸಿನಿಮಾ ತಾರೆಯೋ ಅಥವಾ ಒಬ್ಬ ಕ್ರೀಡಾಕಾರನೋ ಆದರ್ಶವಾಗಿದ್ದಾರೆ. ಆದರೆ ನಿಜವಾದ ಆದರ್ಶ ವ್ಯಕ್ತಿಗಳು ಇಂದು ಅಪರೂಪವಾಗಿದ್ದಾರೆ ಅಂತಹ ಅಪರೂಪದ ವ್ಯಕ್ತಿಗಳಲ್ಲಿ ಡಾ. ಗೌಡರು ಒಬ್ಬರು ಎಂದು ಹೇಳಿದರು. ಹೊಸದಾಗಿ KAPAದ ಸದಸ್ಯರಾಗಿರುವ IRRIನಲ್ಲಿ ಕಾರ್ಯನಿರ್ವಹಿಸುತ್ತಿರುವ ಕಿಶೋರ್ ಗೌಡ ಹಾಗೂ ಈ ಹಿಂದೆ ICRISATನಲ್ಲಿ ಕಾರ್ಯನಿರ್ವಹಿಸಿ ಈಗ ಪಯೋನೀರ್ ಕಂಪನೆಯಲ್ಲಿ ಸಂಶೋಧನಾ ಅಧಿಕಾರಿಯಾಗಿರುವ ಶ್ರೀಶೈಲ್ ಅವರು ಮಾತನಾಡಿ ತಾವು ಶ್ರೀಯುತ ಗೌಡರನ್ನು ಆದರ್ಶವಾಗಿ ತೆಗೆದುಕೊಳ್ಳುವುದಾಗಿ ಹೇಳಿದ್ದಲ್ಲದೇ ಅವರ ಸಾಧನೆಗೆ ಶುಭ ಕೋರಿದರು.
ಡಾ. ಗೌಡರ ಬಗ್ಗೆ ಹೇಳಬೇಕೆಂದರೆ ಅವರು ಮೂಲತಃ ಬಾಸ್ಕೆಟ್ ಬಾಲ್ ಕ್ರೀಡಾಕಾರರು. ಅವರು ನಿಂತಲ್ಲಿಂದಲೇ ಹೇಗೆ ಎತ್ತರದ ಗುರಿಯೆಡೆಗೆ ಚಂಡನ್ನು ಕರಾರುವಾಕ್ಕಾಗಿ ಗುರಿಮುಟ್ಟಿಸಬಲ್ಲವಾರಾಗಿದ್ದರೋ ಅಷ್ಟೇ ಕರಾರುವಾಕ್ಕಾಗಿ ಅವರು ತಾವಿದ್ದ ಸ್ಥಳದಲ್ಲಿಯೇ ಉನ್ನತವಾದ ಗುರಿಗಳನ್ನು ಯಶಸ್ವಿಯಾಗಿ ತಲುಪಿದ್ದಾರೆ. ಅವರ ಬಗ್ಗೆ ಸಂಕ್ಷಿಪ್ತವಾಗಿ ಹೇಳಬೇಕೆಂದರೆ, ಅವರು ಪದವಿಪೂರ್ವ ವ್ಯಾಸಂಗವನ್ನು ಪೂರೈಸಿದ್ದು ಧಾರಾವಾಡ ಕೃಷಿ ಮಹಾವಿದ್ಯಾಲಯದಿಂದ, ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು ಪಂಥನಗರದ ಕೃಷಿ ತಾಂತ್ರಿಕ ಮಹಾವಿದ್ಯಾಲಯದಿಂದ. ಮತ್ತು ಅವರು ತಮ್ಮ ಪಿ.ಎಚ್.ಡಿ ಪದವಿಯನ್ನು ಪಡೆದದ್ದು ದೇಶದ ಪ್ರತಿಷ್ಠಿತ ಸಂಸ್ಥೆಯಾದ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯಾದ IARIನಿಂದ. ಅವರು ತಮ್ಮ ವ್ಯಾಸಂಗದುದ್ದಕ್ಕೂ ಉನ್ನತ ಶ್ರೇಣಿಯಲ್ಲೇ ಉತ್ತೀರ್ಣರಾಗಿರುವುದು ಅವರ ವೈಶಿಷ್ಠ್ಯ. ೧೯೭೫ರಲ್ಲಿ ಕಡಲೆ ಬೆಳೆಯ ತಳಿತಜ್ಞರಾಗಿ ತಮ್ಮ ವೃತ್ತಿ ಜೀವನವನ್ನಾರಂಭಿಸಿದ ಅವರು ವಿವಿಧ ಬೆಳೆಗಳಿಗೆ ಮತ್ತು ಅನುವಂಶೀಯ ವೈವಿಧ್ಯತೆಗೆಳ ಅಧ್ಯಯನ ಹಾಗೂ ಅವನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಸಂಶೋಧನಾ ಸಂಯೋಜಕರಾಗಿ ಕಾರ್ಯನಿರ್ವಹಿಸಿರುವುದಲ್ಲದೇ ಅವರು ಕೃಷಿ ತಾಂತ್ರಿಕತೆ ವಿನಿಮಯದ ಪ್ರಧಾನ ವಿಜ್ಞಾನಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಇದೆಲ್ಲಕ್ಕಿಂತ ಹೆಚ್ಚಾಗಿ ಅವರು ೨೦೦೨ರಿಂದ ಇಲ್ಲಿಯವರೆಗೆ ಅಂದರೆ ಪ್ರಸಕ್ತ DDG ಹುದ್ದೆಯನ್ನು ಅಲಂಕರಿಸುವವರೆಗೆ ಬೆಳೆ ಅಭಿವೃದ್ಧಿ ಮತ್ತು ಅದರ ನಿರ್ವಹಣಾ ಯೋಜನೆಗಳನ್ನು ರೂಪಿಸುವ ವಿಶ್ವಮಟ್ಟದ ಹುರಿಯಾಳಾಗಿ ಕಾರ್ಯನಿರ್ವಹಿಸಿದ್ದಾರೆ. ಡಾ. ಗೌಡರು ಇದುವರೆಗೆ ವಿವಿಧ ರಾಜ್ಯಗಳ, ದೇಶಗಳ ಮತ್ತು ಸಾರ್ವಜನಿಕ ಹಾಗು ಖಾಸಗೀ ಸಂಸ್ಥೆಗಳು ಕೊಡಮಾಡುವ ಸುಮಾರು ಹದಿನೆಂಟು ಪ್ರಶಸ್ತಿ ಪದಕಗಳನ್ನು ಗಳಿಸಿಕೊಂಡಿದ್ದಾರೆ, ಅದೂ ವಿವಿಧ ಬೆಳಗಳಲ್ಲಿ ಮತ್ತು ವಿವಿಧ ಕ್ಷೇತ್ರಗಳಲ್ಲಿ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಆಡು ಮುಟ್ಟದ ಸೊಪ್ಪಿಲ್ಲ ಹಾಗೆಯೇ ಡಾ. ಗೌಡರು ಕೈಯಾಡಿಸದ ಕ್ಷೇತ್ರ ಅಥವಾ ಬೆಳೆಯಿಲ್ಲ, ಅಥವಾ ದೇಶವಿಲ್ಲ ಎಂದು ಹೇಳಬಹುದು. ಸಂಶೋಧನಾ ಲೇಖನಗಳು ಹಾಗು ವೈಜ್ಞಾನಿಕ ಲೇಖನಗಳನ್ನು ಬರೆಯುವುದರಲ್ಲಿಯೂ ಅವರು ಹಿಂದೆ ಬಿದ್ದಿಲ್ಲ. ಅವರು ಸುಮಾರು ೩೪ ಸ್ವತಂತ್ರ ಪುಸ್ತಕಗಳು ಮತ್ತು ೨೪ಕ್ಕೂ ಅಧಿಕ ಪುಸ್ತಕಗಳಲ್ಲಿ ಕೆಲವೊಂದು ಅಧ್ಯಾಯಗಳನ್ನು ಬರೆದಿದ್ದಾರೆ. ಇದಲ್ಲದೇ ಅವರು ಹದಿನಾರಕ್ಕೂ ಅಧಿಕ ವೈಜ್ಞಾನಿಕ ನಿಯತಕಾಲಿಕೆಗಳ ಮತ್ತು ಸಂಸ್ಥೆಗಳ ಸಲಹಾ ಮಂಡಳಿಯ ಸದಸ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದು ಸುಮಾರು ೧೮ಕ್ಕೂ ಅಧಿಕ ಪುಸ್ತಕಗಳ ಸಂಪಾದಕ/ಸಹ-ಸಂಪಾದಕರಾಗಿ ಕೆಲಸ ಮಾಡಿದ್ದಾರೆ. ಅವರ ಇನ್ನೂರಕ್ಕೂ ಅಧಿಕ ಸಂಶೋಧನಾ ಲೇಖನಗಳು, ಬರಹಗಳು ಹಲವಾರು ರಾಷ್ಟ್ರೀಯ, ಅಂತರಾಷ್ಟ್ರೀಯ, ವೈಜ್ಞಾನಿಕ ನಿಯತಕಾಲಿಕೆಗಳಲ್ಲಿ ಪ್ರಕಟಣೆಯಾಗಿವೆ ಹಾಗೂ ಸೆಮಿನಾರುಗಳಲ್ಲಿ ಮಂಡಿಸಲ್ಪಟ್ಟಿವೆ. ಡಾ. ಗೌಡರನ್ನು ವರ್ಣಿಸುವುದೆಂದರೆ, ಒಬ್ಬನ ಮೊಳಕಾಲಿನಷ್ಟೂ ಎತ್ತರವಿಲ್ಲದ ಮನುಷ್ಯ ಉದ್ದನೆಯ ವ್ಯಕ್ತಿಯನ್ನು ಅಳೆಯುವ ಸಾಹಸ ಮಾಡಿದಂತೆ ಎಂದರೆ ಅತಿಶಯೋಕ್ತಿಯಾಗಲಾರದು, ಇಂತಹ ಮೇರು ಸದೃಶ ವ್ಯಕ್ತಿತ್ವ ಡಾ. ಗೌಡ ಅವರದು. ಖಂಡಿತಾ ಇದು ಅತಿಶಯೋಕ್ತಿಯಲ್ಲ ಎನ್ನುವುದು ಅವರ ಸಾಧನೆಗಳ ಅರಿವಿರುವವರಿಗೆ ಅರ್ಥವಾಗುತ್ತದೆ.
ಇವೆಲ್ಲಾ ಒಂದು ಕಡೆಯಾದರೆ ಈ ಕಾರ್ಯಕ್ರಮದ ಮಹತ್ತರ ಮತ್ತು ರಸವತ್ತರ ಘಟ್ಟವು ಸ್ನೇಹಮಯೀ ಪಾನಕೂಟದೊಂದಿಗೆ ಡಾ. ಗೌಡರು ಹಂಚಿಕೊಂಡ ವಿಷಯವಾಗಿತ್ತು. ಈ ರಸಮಯ ಕೂಟದಲ್ಲಿ ಹಲವಾರು ಪ್ರಶ್ನೆಗಳೆದ್ದವು, ಅವೆಲ್ಲಕ್ಕೂ ಸಮಾಧಾನವಾಗಿ ಉತ್ತರಿಸುತ್ತಾ ತಾವು ಅನೇಕ ದಿನಗಳವರೆಗೆ ಕೆಲವೊಮ್ಮೆ ತಿಂಗಳುಗಟ್ಟಲೆ ಮನೆಯಿಂದ ದೂರವಿದ್ದಾಗ್ಯೂ ಸಹ ತಮ್ಮ ಶ್ರೀಮತಿಯವರು ಮನೆಯ ಸಂಪೂರ್ಣ ಜವಾಬ್ದಾರಿಯನ್ನು ನಿರ್ವಹಿಸಿದ್ದು ಮತ್ತು ತಮ್ಮ ವೃತ್ತಿ ಜೀವನದಲ್ಲಿ ಮುನ್ನಡೆ ಸಾಧಿಸುವಲ್ಲಿ ಅವರ ಕೊಟ್ಟ ಸಹಕಾರವನ್ನು ಡಾ. ಗೌಡರು ಸ್ಮರಿಸಿಕೊಂಡರು. ಡಾ. ಗೌಡರು, ಕಿರಿಯರೆಗೆಲ್ಲಾ ತಮ್ಮ ಯಶಸ್ಸಿನ ಕುರಿತಾಗಿ ಒಂದು ಕಿವಿಮಾತು ಹೇಳಿದರು. ನಿನ್ನ ಕಾರ್ಯವನ್ನು ನೀನು ಮಾಡು ಅದು ನಿನ್ನನ್ನು ತಲುಪಬೇಕಾದ ಗುರಿಗೆ ತನ್ನಷ್ಟಕ್ಕೇ ತಾನೇ ಕೊಂಡೊಯ್ಯುತ್ತದೆ ಎಂಬುದಾಗಿ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ You take care of Today and that will take care of Your Tommorrow ಎನ್ನುವ ಜಾಯಮಾನ ಡಾ. ಗೌಡರದು. ಇದೇ ಅವರ ಯಶಸ್ಸಿನ ಸೂತ್ರವಾಗಿದೆ ಕೂಡ. ಡಾ. ಭರತ್ ಸೊಂಟಕ್ಕಿಯವರ ತಮ್ಮ ಮಾತಿನ ಮಧ್ಯದಲ್ಲಿ ಥ್ರೀ ಈಡಿಯಟ್ಸ್ ಸಿನಿಮಾದ ಒಂದು ಸಂವಾದವನ್ನು ಹೇಳಿದರು, "ನಿನ್ನಲ್ಲಿ ನಿಜವಾದ ಅಂತಃಸತ್ವವಿದ್ದರೆ ನೀನು ಯಶಸ್ಸಿನ ಹಿಂದೆ ಓಡಬೇಕಾಗಿಲ್ಲ ಆದರೆ ಆ ಯಶಸ್ಸೇ ನಿನ್ನನ್ನು ಓಡಿಸಿಕೊಂಡು ಮುಂದೆ ಕರೆದೊಯ್ಯುತ್ತದೆ". ಈ ಮಾತು ಡಾ. ಗೌಡರ ವ್ಯಕ್ತತ್ವಕ್ಕೆ ಹಿಡಿದ ಕನ್ನಡಿ ಎಂದರೂ ತಪ್ಪಾಗಲಾರದು. ನಾರಾಯಣ ಭಟ್ಟರು ನಿಮ್ಮ ಜೀವಿತದ ಅತ್ಯಂತ ಸಂತಸದ ಕ್ಷಣ ಯಾವುದೆಂದು ಗೌಡರನ್ನು ಕೇಳಿದಾಗ, ಅವರು ತಾವು ಆಫ್ರಿಕಾದಲ್ಲಿ ಭೇಟಿಯಾದ ರೈತನೊಬ್ಬನ ಘಟನೆಯನ್ನು ನೆನಪಿಸಿಕೊಂಡರು. ICRISAT, India ಇವರು ಸಂಶೋಧಿಸಿದ ತಳಿಯಿಂದಾಗಿ ಆ ರೈತ ತಾನು ಇಂದು ನಿಶ್ಚಿಂತೆಯಾಗಿ ವ್ಯವಸಾಯ ಮಾಡುತ್ತಿರುವುದಲ್ಲದೇ ತಾನೂ ಒಳ್ಳೆಯ ಮನೆಯನ್ನೂ ಕಟ್ಟಿಕೊಂಡದ್ದನ್ನು ಇವರಿಗೆ ತೋರಿಸಿದ್ದಲ್ಲದೇ ಇವರನ್ನು ಬಲವಂತವಾಗಿ ತನ್ನ ಆತಿಥ್ಯ ಸ್ವೀಕರಿಸುವಂತೆ ಮಾಡಿದನಂತೆ. ಅಂದು ಆ ರೈತನ ಮುಖದಲ್ಲಿ ಕಂಡ ಸಂತೃಪ್ತಿಯ ನಗೆ ತಮಗೆ ಸಂದ ಅತ್ಯಂತ ದೊಡ್ಡ ಗೌರವವಾಗಿದೆ ಎಂದು ತಿಳಿಸಿದರು. ತಮಗೆ ಅರ್ಹತೆಯಿದ್ದರೂ ಇದಕ್ಕೂ ಮುಂಚೆ ತಾವು ICRISATನ DDG ಏಕೆ ಆಗಲಿಲ್ಲವೆಂದು ಚನ್ನಮಲ್ಲಿಕಾರ್ಜುನ ಕೇಳಿದ ಯಕ್ಷ ಪ್ರಶ್ನೆಗೆ ಡಾ. ಗೌಡರು ಧರ್ಮರಾಯನಂತೆ ಬಹಳ ಸಮರ್ಪಕವಾದ ಉತ್ತರವನ್ನೇ ಕೊಟ್ಟರು. ಅವರಿಗೆ ಅರ್ಹತೆಯ ಆಧಾರದ ಮೇಲೆ ಅವರಿಗೆ ಈ ಹುದ್ದೆ ಎರಡು ಬಾರಿ ೨೦೦೨ರಲ್ಲಿ ಮತ್ತು ೨೦೦೯ರಲ್ಲಿ ಬರಬೇಕಾಗಿತ್ತು. ಆದರೆ ಇವರು ಒಂದು ಧರ್ಮಸಂಕಟಕ್ಕೆ ಒಳಗಾಗಿ ಆ ಹುದ್ದೆಗೆ ತಮ್ಮ ಅರ್ಜಿಯನ್ನು ಸಲ್ಲಿಸಲಿಲ್ಲ. ಅದೇನೆಂದರೆ ICRISATನ ಮಹಾನಿದೇಶಕರಾಗಿರುವ (DG) ಶ್ರೀಯುತ ವಿಲಿಯಂ ಡರ್ ಅವರು ಏಷ್ಯಾ ಮೂಲದವರು ಮತ್ತು ಇವರೂ ಸಹ ಏಷ್ಯಾ ಮೂಲದವರು. CGIAR ಸಮೂಹ ಸಂಸ್ಥೆಗಳ ಅಂಗ ಸಂಸ್ಥೆಯಾದ ICRISATನಲ್ಲಿರುವ ಅಲಿಖಿತ ಕಾನೂನಿನಂತೆ ಏಕಕಾಲಕ್ಕೆ ಮಹಾನಿರ್ದೇಶಕರ ಹುದ್ದೆಗಳಲ್ಲಿ ಇಬ್ಬರು ಏಷಿಯನ್ನರು ಕಾರ್ಯನಿರ್ವಹಿಸಲು ಸಾಧ್ಯವಿಲ್ಲ. ಇವರಿಗೆ ಅರ್ಹತೆ ಮತ್ತು ಯೋಗ್ಯತೆಗಳಿದ್ದಾಗ್ಯೂ ಸಹ ಡಾ. ವಿಲಿಯಂ ಡರ್ ಅವರನ್ನು ಧರ್ಮಸಂಕಟಕ್ಕೆ ಸಿಲುಕಿಸಬಾರದೆಂದು ಅವರು ಆಗ ಈ ಹುದ್ದೆಗೆ ಅರ್ಜಿ ಹಾಕಲಿಲ್ಲವೆಂದು ತಿಳಿಸಿದರು. ಇದನ್ನು ಯಕ್ಷ ಪ್ರಶ್ನೆ ಎಂದು ಕರೆದ ಹಿನ್ನಲೆ ಏನೆಂದರೆ, ಯಕ್ಷನು ಧರ್ಮರಾಯನನ್ನು ನಿನ್ನ ತಮ್ಮಂದಿರಲ್ಲಿ ಒಬ್ಬನನ್ನು ಬದುಕಿಸ ಬೇಕೆಂದರೆ ಯಾರನ್ನು ಬದುಕಿಸೆಂದು ಬೇಡುತ್ತೀಯಾ ಅಂದಾಗ ಧರ್ಮರಾಯ ಕುಂತಿಯ ಮಗನಾಗಿ ನಾನಿರುವಾಗ, ಮಾದ್ರಿಯ ಮಗನಾಗಿ ನಕುಲನನ್ನು ಬದುಕಿಸು ಎಂದು ಕೇಳಿಕೊಂಡನಂತೆ. ಧರ್ಮರಾಯನ ವಿವೇಕಯುತ ಉತ್ತರದಿಂದ ಸಂತುಷ್ಟನಾದ ಯಮಧರ್ಮ ಅವನೆಲ್ಲಾ ತಮ್ಮಂದಿರನ್ನು ಬದುಕಿಸಿದ ಎನ್ನುವುದು ಬೇರೆ ವಿಷಯ. ಅದೇ ವಿಧವಾಗಿ ಗೌಡರಿಗೆ ನ್ಯಾಯಯುತವಾಗಿ ಸಲ್ಲಬೇಕಾಗಿದ್ದ ಈ ಹುದ್ದೆ ತಡವಾಗಿಯಾದರೂ ಇಂದು ಸಂದಿರುವುದಕ್ಕೆ ನಾವು ಸಂತಸ ವ್ಯಕ್ತಿಪಡಿಸೋಣ. ಇದುವರೆಗೆ, ICRISATನ ಉಪಮಹಾನಿರ್ದೇಶಕ ಹುದ್ದೆಯನ್ನು ಅಲಂಕರಿಸಿದವರು ಕೇವಲ ಇಬ್ಬರೇ ಇಬ್ಬರು ಭಾರತೀಯರು ಅವರಿಬ್ಬರೂ ಉತ್ತರ ಭಾರತೀಯರು, ಆದರೆ ಡಾ. CLL ಗೌಡ ಅವರು ಪ್ರಪ್ರಥಮ ದಕ್ಷಿಣ ಭಾರತೀಯ ಅದರಲ್ಲೂ ಕನ್ನಡಿಗರು ಎನ್ನುವುದು ನಮಗೆಲ್ಲ ಗರ್ವಕಾರಣವಾಗಿದೆ. ಇಂತಹ ಮಹನೀಯರನ್ನು ಹೊಂದಿರುವುದರಿಂದ KAPAದ ಘನತೆ ಹೆಚ್ಚಿದೆ ಮತ್ತು ನಾವೂ ಸಹ ಅದರ ಸದಸ್ಯರಾಗಿರುವುದು ಶ್ರೀ ಶಶಿಕಾಂತ್ ಕುಲಕರ್ಣಿಯವರೆಂದಂತೆ ಜಳಕ ಮಾಡುವವರ ಕೆಳಗೆ ನಿಂತು ನಾವೂ ಸ್ನಾನ ಮಾಡಿ ಪುಣ್ಯದ ಫಲ ಪಡೆದಂತೆ.
ಜೀವನವನ್ನು ಕ್ರೀಡಾ ಮನೋಭಾವದಿಂದ ಸ್ವೀಕರಿಸಿ ತಮ್ಮ ಕಾಯಕವನ್ನು ನಿಷ್ಟೆಯಿಂದ ಮಾಡುತ್ತಿರುವ ಮತ್ತು KAPAದ ಸದಸ್ಯರೆಲ್ಲರಿಗೂ ಸ್ಪೂರ್ತಿದಾಯಕರಾಗಿರುವ ಮತ್ತು ಆದರ್ಶಪ್ರಾಯರಾಗಿರುವ ಡಾ. CLL ಗೌಡರು ಇನ್ನೂ ಹೆಚ್ಚಿನ ಜವಾಬ್ದಾರಿಯುತ ಹುದ್ದೆಗಳನ್ನು ಅಲಂಕರಿಸುವ ಪ್ರಥಮ ಕನ್ನಡಿಗನಾಗಲಿ ಎಂದು ಈ ಸಂದರ್ಭದಲ್ಲಿ ಶುಭಹಾರೈಸೋಣ. ಈ ಸಮಾರಂಭದಲ್ಲಿ ಭಾಗವಹಿಸಿ ಸದಸ್ಯರ ಅನೇಕ ಪ್ರಶ್ನೆಗಳಿಗೆ ಉತ್ತರಿಸಿದ ಮತ್ತು ಡಾ. ಗೌಡ ಅವರ ಪ್ರೇರಕ ಶಕ್ತಿಯಾಗಿರುವ ಅವರ ಶ್ರೀಮತಿ ಸುಶೀಲ ಗೌಡ ಅವರಿಗೂ ಈ ಸಂದರ್ಭದಲ್ಲಿ ಶುಭ ಹಾರೈಸೋಣ.
ಅನಿವಾರ್ಯ ಕಾರಣಗಳಿಂದ ಈ ಸಭೆಯಲ್ಲಿ ಭಾಗವಹಿಸಲು ಸಾಧ್ಯವಾಗದೇ ಇದ್ದ ಡಾ. ಬಿ.ಸಿ. ವಿರಕ್ತಮಠ, ಅಧ್ಯಕ್ಷರು, ಡಾ. ವಿಲಾಸ ಟೊಣಪಿ, ಮತ್ತು ಡಾ. ಹಂಪಯ್ಯ, ಪೀಠಾಧ್ಯಕ್ಷರು, ಜೀವ ವೈವಿಧ್ಯ ಮಂಡಳಿ, ಆಂಧ್ರ ಪ್ರದೇಶ್ ಇವರು ಡಾ. ಗೌಡರಿಗೆ ತಮ್ಮ ಶುಭ ಹಾರೈಕೆಗಳನ್ನು ತಿಳಿಸಿದ್ದಾರೆ. ಹೀಗೆ ಅನಿವಾರ್ಯ ಕಾರಣಗಳಿಂದ ಹಾಜರಾಗದೇ ಇದ್ದವರನ್ನು ಹೊರತುಪಡಿಸಿದರೆ, ಇಂತಹ ಸಮಾರಂಭಗಳಲ್ಲಿ ಭಾಗವಹಿಸಲು ಎಲ್ಲರಿಗೂ ಮುಕ್ತ ಆಹ್ವಾನವಿದ್ದರೂ ಅನೇಕ ಸದಸ್ಯರು ಇಂತಹ ಕಾರ್ಯಕ್ರಮಗಳಿಂದ ವಂಚಿತರಾಗುತ್ತಿರುವುದು ಖೇದದ ಸಂಗತಿ. ಇನ್ನು ಮುಂದಾದರೂ ಇಂತಹ ಅವಕಾಶಗಳನ್ನು ಕಳೆದುಕೊಳ್ಳಬೇಡಿ ಎನ್ನುವುದೇ ನನ್ನ ಆಶಯವಾಗಿದೆ.
*******
ಕೊನೆ ಹನಿ: ಇಂತಹ ದೀರ್ಘ ಬರೆಹವನ್ನು ಓದಿ ಸ್ವಲ್ಪ ಆರಾಮವಾಗಿರಲು ನಮ್ಮ ಜಮಾನಾದ ಒಂದೆರಡು ಜೋಕುಗಳನ್ನು ಕೊಡುತ್ತಿದ್ದೇನೆ
ಯಾರು ಹೆಚ್ಚು ದಡ್ಡರು
ಇಬ್ಬರು ಸರ್ದಾರ್ಜಿಗಳಿದ್ದರು; ಅವರಿಬ್ಬರಿಗೂ ಒಂದು ವಿಷಯದಲ್ಲಿ ಪೈಪೋಟಿಯುಂಟಾಯಿತು. ಅದೇನೆಂದರೆ, ಯಾರ ಮಗ ಹೆಚ್ಚು ದಡ್ಡ ಎನ್ನುವ ವಿಷಯವಾಗಿ. ಅದನ್ನು ಇತ್ಯರ್ಥಗೊಳಿಸಿಕೊಳ್ಳಲು ಅವರಿಬ್ಬರೂ ತಮ್ಮ ಮಕ್ಕಳಿಗೆ ಒಂದೊಂದು ಕೆಲಸ ಹೇಳಿದರು. ಮೊದಲನೆಯವ ತನ್ನ ಮಗನಿಗೆ ಹತ್ತು ರೂಪಾಯಿಗಳನ್ನು ಕೊಟ್ಟು ಎರಡು ಟೀ.ವಿ. ಗಳನ್ನು ಕೊಂಡುಕೊಂಡು ಬರಲು ಹೇಳಿದ. ಇನ್ನೊಬ್ಬ ತನ್ನ ಮಗನಿಗೆ ತಾನು ಆಫೀಸಿನಲ್ಲಿದ್ದೀನೋ ಇಲ್ಲವೋ ಎಂದು ತಿಳಿದುಕೊಂಡು ಬರಲು ಹೇಳಿದ. ಆಗ ಅವರಿಬ್ಬರ ಪುತ್ರರ ನಡುವೆ ನಡೆದ ಸಂಭಾಷಣೆ ಹೀಗಿತ್ತು. ಮೊದಲನೆಯವ, "ನೋಡು ನಮ್ಮಪ್ಪ ಎಷ್ಟು ದಡ್ಡನಿದ್ದಾನೆ,ಟೀ.ವಿ. ತರಲು ಹೇಳಿದ್ದೇನೋ ಸರಿ, ಆದರೆ ಕಲರ್ ಟೀ.ವಿ. ತರಬೇಕೋ ಅಥವಾ ಬ್ಲಾಕ್ ಅಂಡ್ ವೈಟೋ ಎಂದು ತಿಳಿಸಲಿಲ್ಲ!". (ಹತ್ತು ರೂಪಾಯಿಗೆ ಎರಡು ಟೀ. ವಿ. ತೆಗೆದುಕೊಳ್ಳಬಹುದೆಂದು ಕೊಂಡಿದ್ದ ಆ ಭೂಪ!) ಆಗ ಎರಡನೆಯವನು, ನಮ್ಮಪ್ಪ ನನ್ನನ್ನು ಅನಾವಶ್ಯಕವಾಗಿ ಅವರ ಆಫೀಸಿಗೆ ಹೋಗಿ ತಾನು ಇದ್ದೇನೋ ಇಲ್ಲವೋ ತಿಳಿದುಕೊಂಡು ಬರಲು ಹೇಳಿದ್ದಾನೆ, ಅವನೆಂಥಹ ದಡ್ಡ ಮನೆಯಿಂದ ಫೋನ್ ಮಾಡಿ ತಾನು ಆಫೀಸಿನಲ್ಲಿ ಇದ್ದೇನೆ ಇಲ್ಲವೋ ತಿಳಿದುಕೊಳ್ಳಬಹುದಾಗಿತ್ತು" . ಈ ಸ್ಪರ್ಧೆಯಲ್ಲಿ ಎರಡನೆಯವನ ಮಗನೇ ಗೆದ್ದನೆಂದು ಹೇಳಬೇಕಿಲ್ಲ. (ಪುಣ್ಯಕ್ಕೆ ಇವತ್ತು ಭಾನುವಾರದ ರಜೆಯಿರುವುದರಿಂದ ಆಫೀಸಿನಲ್ಲಿ ಫೋನು ಎತ್ತುವವರು ಯಾರೂ ಇರೋಲ್ಲವೆಂದು ನಿನ್ನನ್ನೇ ಖುದ್ದಾಗಿ ಹೋಗಿ ನೋಡಿಕೊಂಡು ಬರಲು ಹೇಳಿದೆ ಎಂದು ಅವರಪ್ಪ ಹೇಳಲಿಲ್ಲ.)
What an Idea Sir.....da......rji…..!!
ಇಬ್ಬರು ಸ್ನೇಹಿತರಿದ್ದರು, ಅವರಿಬ್ಬರೂ ಸರ್ದಾರ್ಜಿಗಳು ಅದು ಬೇರೆ ವಿಷಯ. ಅವರದೇನು ವಿಶೇಷ ಅಂದಿರಾ? ರೈಲಿನಲ್ಲಿ ಒಂದೇ ಟಿಕೆಟ್ ಕೊಂಡುಕೊಂಡು ಇಬ್ಬರೂ ಪ್ರಯಾಣ ಮಾಡುತ್ತಿದ್ದರು. ಒಂದೇ ಟಿಕೆಟ್ಟಿನಲ್ಲಿ ಅದು ಹೇಗೆ ಇಬ್ಬರು ಪ್ರಯಾಣ ಮಾಡಲು ಸಾಧ್ಯ ಅಂದುಕೊಳ್ಳಬೇಡಿ; ಅದಕ್ಕಾಗಿ ಅವರೊಂದು ಸರಳ ಉಪಾಯ ಕಂಡುಕೊಂಡಿದ್ದರು. ಅದೇನೆಂದರೆ TT ಬಂದಾಗ ಇಬ್ಬರೂ ರೈಲಿನ ಲ್ಯಾವಟರಿಯೊಳಗೆ ನುಸುಳುತ್ತಿದ್ದರು. TT ಬಂದು ಟಿಕೆಟ್-ಟಿಕೆಟ್ ಎಂದ ಕೂಡಲೇ ಒಬ್ಬ ಟಾಯ್ಲೆಟ್ಟಿನ ಸಂದಿಯಿಂದ ಕೈತೂರಿಸಿ ಟಿಕೆಟ್ಟನ್ನು ತೋರಿಸುತ್ತಿದ್ದ. ಟಾಯ್ಲೆಟ್ಟಿನಲ್ಲಿ ಇಬ್ಬರಿಬ್ಬರು ಇರುತ್ತಾರೆಯೇ? ಒಬ್ಬರೇ ಇರುತ್ತಾರೆಂದುಕೊಂಡು TT ಇವರ ಟಿಕೆಟ್ಟಿನ ಮೇಲೆ ಸಹಿ ಮಾಡಿ ಮುಂದೆ ಹೋಗುತ್ತಿದ್ದ. ಈ ರೀತಿ ಒಂದೇ ಟಿಕೆಟ್ಟಿನಲ್ಲಿ ಆ ಗಾಂಪರಿಬ್ಬರು ಅರ್ಧರೇಟಿನಲ್ಲಿ ತಮ್ಮ ಪ್ರಯಾಣವನ್ನು ಪೂರೈಸುತ್ತಿದ್ದರು. ಇವರನ್ನು ಪ್ರತಿ ಸ್ಟೇಷನ್ನಿನಲ್ಲಿ ಗಮನಿಸುತ್ತಿದ್ದ ಇಬ್ಬರು Yankeeಗಳು (ಅಮೇರಿಕನ್ನರು) ಓಹೋ ಈ ಉಪಾಯ ಚೆನ್ನಾಗಿದೆ ಇದನ್ನು ನಾವು ಅಳವಡಿಸಿಕೊಳ್ಳೋಣವೆಂದುಕೊಂಡು ಅವರೂ ಕೂಡ ಒಂದೇ ಟಿಕೆಟ್ ಖರೀದಿಸಿದರು. TT ಬರುತ್ತಿದ್ದಂತೆಯೇ ಓಡಿ ಹೋಗಿ ಟಾಯ್ಲೆಟ್ಟಿನ ಒಳಹೊಕ್ಕರು. ಆಗ ನಮ್ಮ ಸರ್ದಾರ್ಜಿಗಳಲ್ಲೊಬ್ಬ ಟಾಯ್ಲೆಟ್ಟಿನ ಬಳಿ ಹೋಗಿ, TT ಎನ್ನುವಂತೆ ಟಿಕೆಟ್-ಟೆಕೆಟ್ ಎಂದು ಕೂಗಿದ. ಆಗYankeeಯೊಬ್ಬ ಟಿಕೆಟ್ ಹಿಡಿದ ಕೈಯ್ಯೊಂದನ್ನು ಹೊರಗೆ ತೂರಿಸಿದ, ಅವನ ಕೈಯಿಂದ ಟಿಕೆಟ್ ಕಿತ್ತುಕೊಂಡವನೇ ಆ ಸರ್ದಾರ್ಜಿ ತನ್ನ ಸೀಟಿನಲ್ಲಿ ಬಂದು ಕುಳಿತುಕೊಂಡ. TT ಬಂದಾಗ ಈ ಅಪೂರ್ವ ಸಹೋದರರಿಬ್ಬರು ಎರಡು ಟಿಕೆಟ್ ತೋರಿಸಿದರೆ ಪಾಪ ಟಾಯ್ಲೆಟ್ಟಿನಲ್ಲಿದ್ದ Yankeeಗಳು ಟಿಕೆಟ್ಟಿಲ್ಲದೆDonkeyಗಳಾಗಿದ್ದರು.
Comments
Post a Comment