ಕರ್ನಾಟಕದ ರಾಜಕಾರಣಿಗಳಿಗೆ ನಿಷ್ಟೆ ಇಲ್ಲವೆ?
ವಿಶ್ವ ವಿಖ್ಯಾತ (ಅ)ನೀತಿ ಕಥೆಗಳು
ಒಂದಾನೊಂದು ರಾಜ್ಯ, ಆ ರಾಜ್ಯದ ಮೇಲೆ ಶತ್ರುಗಳು ದಂಡೆತ್ತಿ ಬಂದರು. ಇಲ್ಲಿಯ ಸೈನಿಕರೂ ಎಷ್ಟೇ ವೀರಾವೇಷದಿಂದ ಹೋರಾಡಿದರೂ ಶತ್ರುಗಳ ಕೈ ಮೇಲಾಗುತ್ತಿತ್ತು. ಇದಕ್ಕೆ ಪರಿಹಾರವೇನೆಂದು ರಾಜ ತನ್ನ ಆಪ್ತರೊಂದಿಗೆ ಸಮಾಲೋಚನೆ ನಡೆಸಿದ. ಆಗ ಓರ್ವ ಮಂತ್ರಿ ಒಂದು ಸಲಹೆಯನ್ನು ಕೊಟ್ಟ; ಅದೇನೆಂದರೆ ರಾಜಧಾನಿಯ ಹತ್ತಿರವಿರುವ ಕಾಡಿನಲ್ಲಿ ತಪೋನಿರತನಾಗಿರುವ ಮುನಿಯ ಬಳಿಗೆ ಸಾರಿ ಅವರ ಹತ್ತಿರ ತಮ್ಮ ರಾಜ್ಯವನ್ನು ಸಂಕಷ್ಟದಿಂದ ಪಾರುಮಾಡೆಂದು ಬೇಡುವುದು ಮತ್ತು ಅವನ ಮಾರ್ಗದರ್ಶನದಂತೆ ನಡೆಯುವುದು. ಎಲ್ಲರಿಗೂ ಈ ಸೂಚನೆ ಸರಿಯೆನಿಸಿತು. ಅದರಂತೆ ರಾಜನು ತನ್ನ ಪರಿವಾರದೊಂದಿಗೆ ಮುನಿಯಿರುವಲ್ಲಿಗೆ ಹೊರಟು ತನ್ನ ಕಷ್ಟವನ್ನು ನಿವೇದಿಸಿಕೊಂಡ. ಮುನಿಯಿವರಿಗೆ ಒಂದು ಸಲಹೆಯಿತ್ತ, ಅದೇನೆಂದರೆ ಒಬ್ಬ ಪತಿವ್ರತೆಯ ಮುಂದಾಳತ್ವದಲ್ಲಿ ನಿಮ್ಮ ಸೇನೆಯು ಯುದ್ಧ ಮಾಡಿದರೆ ನಿಮಗೆ ಜಯವಾಗುತ್ತದೆಂಬುದು. ರಾಜ ಹಗುರ ಮನಸ್ಸಿನಿಂದ ತನ್ನ ಸಮಸ್ಯೆಗೆ ಸುಲಭ ಪರಿಹಾರ ದೊರೆಯಿತೆಂದು ನಿರಾಳ ಮನಸ್ಕನಾಗಿ ತನ್ನ ಅರಮನೆಗೆ ಹಿಂತಿರುಗಿದ. ಆದರೆ ಅಸಲು ಸಮಸ್ಯೆ ಶುರುವಾದದ್ದೇ ಒಬ್ಬ ಪತಿವ್ರತಾ ಶಿರೋಮಣಿಯನ್ನು ಹುಡುಕಲಿಕ್ಕೆ ಪ್ರಾರಂಭಿಸಿದ ಮೇಲೆ. ಮೊದಲನೆಯದಾಗಿ ಸೇನಾಪತಿಯ ಹೆಂಡತಿಯನ್ನು ಸೇನೆಯ ನಾಯಕತ್ವವನ್ನು ವಹಿಸಿಕೊಳ್ಳಲು ಕೇಳಲಾಯಿತು. ಆಗ ಸೇನಾಪತಿಯ ಹೆಂಡತಿ ತನ್ನ ಪತಿ ಯಾವಾಗಲೂ ಯುದ್ಧದಲ್ಲಿ ತೊಡಗಿರುವುದರಿಂದ ತಾನು ತನ್ನ ಕೋರಿಕೆಗಳನ್ನು ಬೇರೆ ಪುರುಷರಿಂದ ಪೂರೈಸಿಕೊಂಡಿರುವುದಾಗಿ ತಾನು ಪತಿವ್ರತೆಯಾಗಿ ಉಳಿದಿಲ್ಲವೆಂದು ತಿಳಿಸಿದಳು. ಅದರಂತೆ ಮಂತ್ರಿಯು ಸದಾ ರಾಜಕಾರ್ಯಗಳಲ್ಲಿ ತೊಡಗಿಕೊಂಡು ತನ್ನನ್ನು ಸರಿಯಾಗಿ ಗಮನಿಸಿಕೊಳ್ಳದೇ ಇರುವುದರಿಂದ ತಾನೂ ಯೋಗ್ಯಳಲ್ಲವೆಂದು ಮಂತ್ರಿಯ ಹೆಂಡತಿ ತಿಳಿಸಿದಳು. ಅನ್ಯ ಮಾರ್ಗವಿಲ್ಲದೆ ರಾಜ ಕಡಯೆದಾಗಿ ತನ್ನ ರಾಣಿಯನ್ನು ಸೇನೆಯ ಮುಂದಾಳತ್ವವನ್ನು ವಹಿಸಿಕೊಳ್ಳಲು ಹೇಳಿದ. ರಾಜನು ಒಮ್ಮೆ ಬಹಳ ದೀರ್ಘಕಾಲ ಭೇಟೆಗೆ ಹೋದಾಗ ತಾನೊಮ್ಮೆ ಪರಪುರುಷನ ಸಹವಾಸ ಮಾಡಿರುವುದರಿಂದ ತಾನು ಅದಕ್ಕೆ ಅರ್ಹಳಲ್ಲವೆಂದು ರಾಣಿಯು ತಿಳಿಸಿದಳು. ರಾಜ ಈಗ ನಿಜಕ್ಕೂ ಚಿಂತಾಕ್ರಾಂತನಾದ; ಏನಾದರಾಗಲಿ ಎಂದುಕೊಂಡು ತನ್ನ ರಾಜ್ಯದೆಲ್ಲೆಡೆ ತಮ್ಮ ರಾಜ್ಯವನ್ನು ಕಾಪಾಡುವಂತೆ ಕೋರಿ, ಯಾರಾದರು ಪತಿವ್ರತೆಯರು ಸೇನೆಯ ಮುಂದಾಳತ್ವವನ್ನು ವಹಿಸಿಕೊಳ್ಳಬೇಕೆಂದು ತಿಳಿಸಿ ಡಂಗುರವನ್ನು ಹಾಕಿಸಿದ. ಅವನ ಆಣತಿಯಂತೆ ಸೇನೆಯ ಮುಖಂಡತ್ವವನ್ನು ವಹಿಸಿಕೊಳ್ಳಲು ಯಾವ ಸ್ತ್ರೀಯು ಯೋಗ್ಯಳಿರಲಿಲ್ಲ; ಅಂಥಾದ್ದರಲ್ಲಿ ಓರ್ವ ಹೆಂಗಸು ತಾನು ಪರಮ ಪತಿವ್ರತೆಯೆಂದೂ ತಾನು ಸೇನೆಯ ಮುಂದಾಳತ್ವವನ್ನು ವಹಿಸಿಕೊಳ್ಳಲು ಸಿದ್ಧಳಾಗಿರುವೆನೆಂದು ತಿಳಿಸಿ ಅರಮನೆಯ ಒಡ್ಡೋಲಗವನ್ನು ಪ್ರವೇಶಿಸಿದಳು. ಅಲ್ಲಿದ್ದ ಸಭಿಕರೆಲ್ಲಾ ಅವಳನ್ನು ನೋಡಿ ಮೂಗು ಮುರಿದರು, "ಏನು ಇವಳು ನಮ್ಮ ಸೇನೆಯ ಮುಂದಾಳತ್ವವನ್ನು ವಹಿಸಿಕೊಳ್ಳಲು ಯೋಗ್ಯಳಾ?", ಏಕೆಂದರೆ ಅವಳು ಆ ನಗರದ ಪ್ರಖ್ಯಾತ ಗಣಿಕೆ. ಸಭಿಕರ ಮನದಿಂಗಿತವನ್ನು ಅರಿತ ರಾಜ ಅವಳು ಹೇಗೆ ಯೋಗ್ಯಳು ಎಂದು ಅವಳನ್ನು ಪ್ರಶ್ನಿಸಿದ. ಆಗ ಅವಳೆಂದಳು, "ನನಗೆ ಪತಿಯೆಂದರೆ ಹಣವೆ! ನಾನು ಅದಕ್ಕೆ ಯಾವಾಗಲೂ ನಿಷ್ಟಳಾಗಿಯೇ ಇದ್ದೇನೆ! ಇದರಲ್ಲಿ ಎರಡು ಮಾತಿಲ್ಲ, ಈ ವಿಷಯವಾಗಿ ನೀವು ಇಲ್ಲಿ ಕುಳಿತಿರುವ ಯಾರನ್ನಾದರೂ ಪ್ರಶ್ನಿಸಬಹುದು". ಅವಳ ಈ ಮಾತನ್ನು ಎಲ್ಲರೂ ಒಪ್ಪಿದ್ದರಿಂದ ಅವಳು ಪತಿವ್ರತೆಯೆಂದು ನಿರ್ಧಾರವಾಯಿತು ಮತ್ತು ಅವಳ ಮುಂದಾಳತ್ವದಲ್ಲಿ ಹೊರಟ ಸೇನೆ ವಿಜಯಿಯಾಯಿತೆಂದು ಹೇಳಬೇಕಾಗಿಲ್ಲ.
ಈ ಮೇಲಿನ ಕಥೆಯನ್ನೇ ನಮ್ಮ ಎಲ್ಲಾ ರಾಜಕಾರಣಿಗಳು ಅಳವಡಿಸಿಕೊಂಡಿರುವುದು. ಅವರು ಯಾವತ್ತೂ ಹಣಕ್ಕೆ ನಿಷ್ಠರಾಗಿಯೇ ಇದ್ದಾರೆ; ಆದ್ದರಿಂದ ಅವರು ಪಕ್ಷಕ್ಕೆ ನಿಷ್ಠರಲ್ಲ ಅಥವಾ ತಮ್ಮನ್ನಾರಿಸಿದ ಮತದಾರರಿಗೆ ನಿಷ್ಠರಾಗಿಲ್ಲ ಎಂದು ತಿಳಿದುಕೊಳ್ಳುವುದು ತಪ್ಪು.
ರಾಜಕಾರಣಿಗಳಿಗಷ್ಟೇ ಅಲ್ಲ, ನಮ್ಮ ರಾಜ್ಯದ ಮಠಾಧೀಶರಿಗೂ, ಅವರನ್ನು ಬೆಂಬಲಿಸುವ ಜಾತಿಕೋರ ಪ್ರಜೆಗಳಿಗೂ ನಿಷ್ಟೆ ಎಂಬುದಿಲ್ಲ. "ಕಾಂಚಾಣಾಂ ಕಾರ್ಯಸಿದ್ದಿ" ಜೊತೆಗೆ ಈಗ "ಜಾತಿವಾದಂ ಸಕಲ ಸಿದ್ದಿ" ಆಗಿದೆ.
ReplyDeleteನಾನು ಈ ಬ್ಲಾಗನ್ನು ಹುಟ್ಟು ಹಾಕಿ ಹೇಗೆ ಇದನ್ನು ಮುಂದುವರೆಸಿಕೊಂಡು ಹೋಗಬೇಕೋ ತಿಳಿಯದೆ ಕಂಗಾಲಾಗಿದ್ದೆ. ಇತ್ತೀಚೆಗೆ ಮಿತ್ರರೋರ್ವರು ಇದನ್ನು ನಿರ್ವಹಿಸುವುದರ ಕುರಿತು ತಿಳುವಳಿಕೆ ಕೊಟ್ಟರು. ಹಾಗಾಗಿ ನನ್ನ ಬ್ಲಾಗನ್ನೇ ನಾನು ಅಕಸ್ಮಾತ್ತಾಗಿ ನೋಡಿದೆ. ನೋಡಿದರೆ ಇದಕ್ಕೆ ನಿಮ್ಮಂತಹ ಸಹೃದಯರಿಂದ ಒಂದು ಪ್ರತಿಕ್ರಿಯೆ ಬಂದಿದೆ. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ಶ್ರೀಪತಿಯವರೆ.
Deleteವಂದನಗೆಳೊಂದಿಗೆ,
ಮಕರ